Thursday, March 1, 2012

ನಟರಾಜು :: ಎಲೆಮರೆ ಕಾಯಿಗಳ ಜೊತೆ ಮಾತುಕತೆ.....3

ಎಲೆಮರೆ ಕಾಯಿಗಳ ಜೊತೆ ಮಾತುಕತೆ.....3
----------------------------------------
ನನ್ನ ಹೃದಯದ
ರಕ್ತದ ಕಣಕಣದಲ್ಲೂ
ಮಿಂಚುತಿದೆ ನಿನ್ನ ಹೆಸರು
ಕಂಡಾಗ
ನವಿಲುಗರಿ ಹಿಡಿದಿದ್ದ ನಿನ್ನ
ಪುಸ್ತಕದ ಪುಟಗಳಲ್ಲೆಲ್ಲಾ
"ನನ್ನ ಹೆಸರು".

ಮೇಲಿನ ಸಾಲುಗಳನ್ನು ಬರೆದ ಕವಿಗೊಮ್ಮೆ

"ರಾಘವೇಂದ್ರರವರೆ, ಪ್ರೀತಿಗೆ ಹಾಗು ಅದರ ಒಡೆಯನಿಗೆ ಒಂದು ಮುಗ್ಧತೆ ಇರುತ್ತೆ. ನಿಮ್ಮ ಕಣ್ಣುಗಳಲ್ಲಿ ಹಾಗು ನಿಮ್ಮ ಕವಿತೆಗಳಲ್ಲಿ ಅದು ಎದ್ದು ಕಾಣುತ್ತೆ.. ಪುಸ್ತಕದಲ್ಲಿ ಹೆಸರು ಬರೆಸಿಕೊಂಡ ನೀವು ಪುಣ್ಯವಂತರು...." ಅಂತ ನಮ್ಮ ಕನ್ನಡ ಬ್ಲಾಗಿನಲಿ ಮೇಲಿನ ಕವಿತೆಯ ಸಾಲುಗಳಿಗೆ ಪ್ರತಿಕ್ರಿಯೆಯೊಂದನು ಬರೆದಿದ್ದೆ...

ಆ ಕವಿಗೂ ನನಗೂ ಬ್ಲಾಗಿನ ಲೋಕದಲಿ ಮುಖಾಮುಖಿಯಾದದ್ದು ಅದೇ ಮೊದಲು..ನಂತರದ ದಿನಗಳಲ್ಲಿ ಅದೇ ಕವಿ..

ಯಾವುದೋ ಪುಸ್ತಕದ ಮಡಿಲಲ್ಲಿ,
ಹಾಯಾಗಿ ಮಲಗಿದ್ದೆ ನಾನು..
ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,
ನನ್ನ. ಅಬ್ಬಾ..! ದೋಣಿಯಾಗಿದ್ದೆ ನಾನು.

ಅಂತ ಬರೆದು ಗೆಳೆಯರೊಬ್ಬರಿಂದ ಕಾಮೆಂಟೊಂದರಲಿ 5 ಸ್ಟಾರ್ ಗಳನ್ನು ಪಡೆದಿದ್ದರು..

"ಯಾರು ಈ ಕವಿ?" ಎಂದು ಕುತೂಹಲದಿಂದ ಈ ಕವಿಯ ಫೇಸ್ ಬುಕ್ ನ ಪುಟದ ಒಳ ಹೊಕ್ಕಿದಾಗ ದಿನಾಂಕ 30.10.2007 ಕನ್ನಡ ಪ್ರಭ ಎಂಬ ಫೋಟೋ ಕಣ್ಣಿಗೆ ಬಿದ್ದಿತ್ತು..ನಂತರ ಅಚ್ಚರಿಯಿಂದ ಆ ಫೋಟೋದಲ್ಲಿ ಸೂಚಿಸಿದ್ದ ವೆಬ್ ತಾಣವೊಂದರ ಒಳಹೊಕ್ಕಿದ್ದೆ..

ಚಿತ್ರದುರ್ಗ ಜಿಲ್ಲೆಗೆ ಬಹು ಪುರಾತನ ಇತಿಹಾಸವಿದೆ. ಕರ್ನಾಟಕ ರಾಜ್ಯದ ಮಧ್ಯಭಾಗದಲ್ಲಿರುವ (ಬೆಂಗಳೂರಿನಿಂದ 200 ಕಿ.ಮೀ, ಹಾಗೂ ಹಂಪೆಯಿಂದ 120 ಕಿ.ಮೀ. ದೂರ) ಚಿತ್ರದುರ್ಗ ಜಿಲ್ಲೆಯು ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ ಮತ್ತು ಮೊಳಕಾಲ್ಮೂರು ಎಂಬ ಆರು ತಾಲ್ಲೂಕುಗಳನ್ನು ಒಳಗೊಂಡಿದ್ದು, ಸುಮಾರು 1046 ಗ್ರಾಮಗಳನ್ನು ಹೊಂದಿದೆ.............

ಎಂದು ಚಿತ್ರದುರ್ಗದ ಬಗ್ಗೆ ಕಿರು ಪರಿಚಯದ ಪುಟ ಹೊತ್ತಿರುವ ಚಿತ್ತಾರ ದುರ್ಗ ವೆಂಬ ಕನ್ನಡ ವೆಬ್ ತಾಣವನ್ನು ನೋಡಿ ಖುಷಿಯಾಗಿದ್ದೆ. ಚಿತ್ತಾರ ದುರ್ಗ ವೆಂಬ ಚಿತ್ರದುರ್ಗದ ಪ್ರಥಮ ಕನ್ನಡ ವೆಬ್ ಹುಟ್ಟು ಹಾಕಿದ ಗೆಳೆಯ ನಮ್ಮ ಕನ್ನಡ ಬ್ಲಾಗಿನಲಿ ಆಗಾಗ ಕವಿತೆಗಳನ್ನೂ ಬರೆಯುತ್ತಾರೆ ಎಂದು ತಿಳಿದು ಮತ್ತಷ್ಟು ಖುಷಿಯಾಗಿ ಈ ಕವಿ ಗೆಳೆಯನನ್ನು ಎಲೆ ಮರೆ ಕಾಯಿಗಳ ಜೊತೆ ಮಾತುಕತೆಗೆ ಕರೆತರುವ ಇಚ್ಚೆಯಾಗಿತ್ತು..

ಸದಾ ಬ್ಯುಸಿಯಾಗಿರುವ ಈ ಗೆಳೆಯನ ಜೊತೆಗೆ ಮಾತುಕತೆಗೆ ಮುನ್ನ ಈ ಗೆಳೆಯನ ಬ್ಲಾಗೊಂದರ ಕೊಂಡಿಯನ್ನು ಹಿಡಿದು ಹೊರಟಾಗ ಈ ಬರಹಗಾರ ಕನಿಷ್ಠ ಒಂದು ಡಜನ್ ಬ್ಲಾಗಿನ ಮಾಲಿಕ ಎಂದು ತಿಳಿದು ಮತ್ತಷ್ಟು ಅಚ್ಚರಿಯಾಯಿತು. ಒಂದು ಬ್ಲಾಗ್ ಅನ್ನು ಹೇಗೆ ವಿನ್ಯಾಸ ಮಾಡಬೇಕು.. ಅದು ಓದುಗರಿಗೆ ತಲುಪುವಂತೆ ಏನು ಮಾಡಬೇಕು.. ಅನ್ನೋದನ್ನು ಈ ಗೆಳೆಯನಿಂದ ಕೇಳಿ ಕಲೀಬೇಕು ಅನ್ನಿಸಿತ್ತು..ಆ ಅನಿಸುವಿಕೆಯ ನಡುವೆ...

ಕಳೆದ ಮೂರ್ನಾಲ್ಕು ವರ್ಷಗಳಿಂದ ಬ್ಲಾಗಿಗ ನಾಗಿರುವ ಫೇಸ್ ಬುಕ್ಕಿನಲಿ R Raghavendra Padmashali ಎಂದಿರುವ ಆರ್. ರಾಘವೇಂದ್ರ ಎಂಬ ಹೆಸರಿನ ಈ ಕವಿಯು ವೃತ್ತಿಯಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಈ ಯುವ ಕವಿಯ ಅತಿ ಕಿರು ಪರಿಚಯವನ್ನು ಅವರದೇ ಮಾತಿನಲ್ಲಿ ಕೇಳಿ..

"ನಾನೊಬ್ಬ ಬ್ಲಾಗಿಗ. ನಾನು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವನು. ಕನ್ನಡದ ಮೇಲೆ ತುಸು ಪ್ರೀತಿ ಜಾಸ್ತಿ. ನಾನು ಮತ್ತು ನನ್ನ ಗೆಳೆಯರು, ಪ್ರೋತ್ಸಾಹಕರೊಂದಿಗೆ ಸೇರಿ ಮಾಡಿದ ಮೊದಲ ವೆಬ್ ಸೈಟ್ ಎಂದರೇ ಚಿತ್ತಾರದುರ್ಗ.ಕಾಂ (www.chitharadurga.com). ಈ ವೆಬ್ ತಾಣವು ಕರ್ನಾಟಕದ ಮೊದಲ ಕನ್ನಡ ಜಿಲ್ಲಾ ವೆಬ್ ಸೈಟ್ ಕೂಡ ಆಗಿದೆ.

ಆಗೊಮ್ಮೆ ಈಗೊಮ್ಮೆ ಕವಿತೆ ಬರೆಯುವ ಹುಚ್ಚು. ಮನಸಿನಲಿ ಮೂಡುವ ಅದೆಷ್ಟೋ ಭಾವನೆಗಳಿಗೆ ತುಂಬಾ ಸರಳತೆಯಿಂದ ಎಂಥವರಿಗೂ ಅರ್ಥವಾಗುವಂತೆ ಬರೆಯುವ ಪ್ರಯತ್ನ ಮಾಡುತ್ತಿರುತ್ತೇನೆ. ಇನ್ನಷ್ಟೂ ಅನೇಕ ಬ್ಲಾಗ್ ಗಳನ್ನು ತೆರೆಯುವ ಹಾಗೂ ಕನ್ನಡ ವೆಬ್ ಸೈಟ್ ಗಳನ್ನು ಮಾಡುವ ಕನಸಿದೆ. ತಂತ್ರಜ್ಞಾನ ಬಳಸಿ ಕನ್ನಡದ ಕಂಪನ್ನು ಕನ್ನಡೇತರರಿಗೂ ಪರಿಚಯಿಸುವ ಚಿಕ್ಕದೊಂದು ಆಸೆಯಿದೆ."

ಎರಡೇ ಮಾತು ಹೇಳಿ ಮಾತು ಮುಗಿಸಿದ ಈ ಕವಿಯ ಕವನಗಳ ಓದಲು ಅವರ ಬ್ಲಾಗೊಂದರ ವಿಳಾಸ ಈ ಕೆಳಗಿನಂತಿದೆ..
http://preethiyahadu.blogspot.com/

ತಡವಾಗಿ ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು..ಎಳ್ಳು ಬೆಲ್ಲ ಕಳುಹಿಸಿಕೊಡಿ... :-)

ಮತ್ತೆ ಸಿಗೋಣ..

ನಿಮ್ಮ ಪ್ರೀತಿಯ
ನಟರಾಜು
http://smnattu.blogspot.com/